ಅಧಿಕೋಷ್ಣಕ

ಅಧಿಕ ಒತ್ತಡದಲ್ಲಿರುವ ನೀರಿನ ಆವಿಗೆ ಹೆಚ್ಚಿನ ಉಷ್ಣವನ್ನು ಒದಗಿಸಿ ಆ ಆವಿಯ ಉಷ್ಣತೆ ಸಂತೃಪ್ತ ಉಷ್ಣತೆಯನ್ನು (ಸ್ಯಾಚುರೇಷನ್ ಟೆಂಪರೇಚರ್) ಮೀರಿ ಏರುವಂತೆ ಮಾಡುವ ಸಾಧನ (ಸೂಪರ್ ಹೀಟರ್). ನೀರಿನೊಡನೆ ಇರುವ ಆವಿಯನ್ನು ಎಷ್ಟು ಕಾಯಿಸಿದರೂ ನೀರಿನಿಂದ ಇನ್ನೂ ಹೆಚ್ಚಿನ ಆವಿ ಉತ್ಪನ್ನವಾಗುವುದೇ ವಿನಾ ಆವಿಯ ಉಷ್ಣತೆ ಏರುವುದಿಲ್ಲ. ಆದ್ದರಿಂದ ಆವಿಯನ್ನು ನೀರಿನಿಂದ ಬೇರ್ಪಡಿಸುವುದು ಅವಶ್ಯಕ. ಇದಕ್ಕಾಗಿ ಆವಿಯನ್ನು ಪ್ರತ್ಯೇಕ ನಾಳಗಳಿಗೆ ಸಾಗಿಸಿ ಅಲ್ಲಿ ಅದಕ್ಕೆ ಅಧಿಕ ಉಷ್ಣವನ್ನು ಒದಗಿಸಲಾಗುವುದು. ಹೀಗೆ ಅಧಿಕೋಷ್ಣ ಪಡೆದ ಆವಿಯ ಪ್ರತಿ ಪೌಂಡಿನಲ್ಲಿಯೂ ದೊರೆಯುವ ಚಲನಶಕ್ತಿ ಅಪಾರ. ಈ ಕಾರಣದಿಂದ ಉಗಿಸ್ಥಾವರಗಳಲ್ಲೆಲ್ಲ ಅಧಿಕೋಷ್ಣಕ ಒಂದು ಅನಿವಾರ್ಯ ಅಂಗ. ಆಧುನಿಕ ಉಗಿ ಉತ್ಪಾದಕಗಳಲ್ಲಿ (ಸ್ಟೀಮ್ ಜನರೇಟರ್ಸ್) ಅಧಿಕ ಒತ್ತಡದ ಜೊತೆಗೆ ಅಧಿಕ ಉಷ್ಣತೆಯೂ ಹೊಯ್‍ಕೈಯಾಗಿದ್ದು ಅಧಿಕೋಷ್ಣಕದ ಪ್ರಾಮುಖ್ಯ ಹೆಚ್ಚುತ್ತಲೇ ಇದೆ. ಈ ಕಾರಣದಿಂದ ಅಧಿಕೋಷ್ಣಕಕ್ಕೆ ಹೊಂದುವಂತೆ ಆವಿಗೆಯನ್ನು ರೂಪಿಸು ಎಂಬ ಅನುಭವಸಿದ್ಧಾಂತ ಪ್ರಚಲಿತವಾಗಿದೆ.

ಉಷ್ಣವನ್ನು ಸ್ವೀಕರಿಸುವ ಬಗೆಯಿಂದಾಗಿ ಅಧಿಕೋಷ್ಣಕಗಳನ್ನು ಪ್ರಜ್ವಲನ ಮತ್ತು ಪ್ರಚಲನ ರೀತಿಯವೆಂದು ವಿಂಗಡಿಸಬಹುದು. ಪ್ರಜ್ವಲನ ಅಧಿಕೋಷ್ಣಕಗಳು ಕುಲುಮೆಯೊಳಗಿನ ಜ್ವಾಲೆಯನ್ನು ದರ್ಶಿಸುತ್ತಿರುವಂತೆ, ಗೋಡೆಯನ್ನು ತಂಪಾಗಿಡುವ ಸಾಧನವಿಸ್ತಾರದ ಒಂದು ಭಾಗವಾಗಿ ಅವನ್ನು ಅಳವಡಿಸಿರುವುದರಿಂದ ಜ್ವಾಲೆಯ ವಿಕಿರಣಉಷ್ಣವನ್ನು ಹೀರಿಕೊಳ್ಳುತ್ತವೆ. ಈ ರೀತಿಯ ಉಷ್ಣಪ್ರವಾಹ ಜ್ವಾಲೆಯ ಮತ್ತು ಅಧಿಕೋಷ್ಣಕದ ಉಷ್ಣತಾವ್ಯತ್ಯಾಸವನ್ನು ಮಾತ್ರ ಅವಲಂಬಿಸಿರುವುದರಿಂದ ಒಂದು ನಿರ್ದಿಷ್ಟ ಅವಧಿಯಲ್ಲಿ ಆಗುವ ಉಷ್ಣಪ್ರವಾಹದ ಮೊತ್ತ ಸುಮಾರು ಒಂದೇ ಸಮವಾಗಿರುತ್ತದೆ. ಇದರ ಪರಿಣಾಮ ಆವಿಯ ಸರಬರಾಜುವೇಗ ಕಡಿಮೆಯಿರುವಾಗ ಈ ಸಾಧನ ಹೆಚ್ಚು ಕಾವುಗೊಳ್ಳುವುದೂ ಮತ್ತು ಆವಿಯ ಸರಬರಾಜುವೇಗ ಹೆಚ್ಚು ಇರುವಾಗ ಕಡಿಮೆ ಕಾವುಗೊಳ್ಳುವುದೂ ಆಗಿರುತ್ತದೆ. ಅಂದರೆ, ತಿರುಬಾನಿಯ ಕಾರ್ಯಭಾರ (ವರ್ಕ್‍ಲೋಡ್) ಹೆಚ್ಚಿದಂತೆ ಅದಕ್ಕೆ ಒದಗಿಸುತ್ತಿರುವ ಆವಿಯ ತಾಪ ಇಳಿಮುಖವಾಗುತ್ತದೆ.

ಪ್ರಚಲನ ಅಧಿಕೋಷ್ಣಕ ತನ್ನ ಮೈಮೇಲೆ ಹಾದುಹೋಗುವ ಅನಿಲಗಳಿಂದ ಉಷ್ಣವನ್ನು ಸ್ವೀಕರಿಸುತ್ತದೆ. ಇಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಆಗುವ ಉಷ್ಣಪ್ರವಾಹದ ಪ್ರಮಾಣ ಅಧಿಕೋಷ್ಣಕದ ಮೇಲೆ ಹಾಯುವ ಅನಿಲಗಳ ಒಟ್ಟು ಮೊತ್ತವನ್ನು ಅವಲಂಬಿಸಿರುತ್ತದೆ. ಕಾರ್ಯಭಾರ ಹೆಚ್ಚಿದಂತೆ ಅನಿಲಪ್ರವಾಹದ ವೇಗವೂ ಹೆಚ್ಚುವುದರಿಂದ, ಆವಿಯ ಸರಬರಾಜು ಹೆಚ್ಚುತ್ತಿರುವಂತೆಯೇ ಅದರ ಉಷ್ಣತೆಯೂ ಏರುತ್ತಿರುತ್ತದೆ. ಈ ಎರಡು ಬಗೆಯ ಅಧಿಕೋಷ್ಣಕಗಳು, ಉಷ್ಣತೆಯ ಬಗ್ಗೆ ತೋರಿಸುವ ವಿರುದ್ಧ ಪ್ರತಿಕ್ರಿಯೆ ಒಂದು ರೀತಿ ಅನುಕೂಲವಾಗಿದೆ ಎಂದೇ ಹೇಳಬೇಕು. ಏಕೆಂದರೆ ಈ ಎರಡೂ ರೀತಿಯ ಅಧಿಕೋಷ್ಣಕಗಳನ್ನು ಲೆಕ್ಕಾಚಾರಮಾಡಿದ ಅಳತೆಗಳಲ್ಲಿ ಒಂದು ಆವಿಗೆಯಲ್ಲಿ ಉಪಯೋಗಿಸಿ ಒಂದರ ಅನಂತರ ಇನ್ನೊಂದರಲ್ಲಿ ಆವಿ ಸಾಗುವಂತೆ ಮಾಡುವುದರಿಂದ ಒಂದು ಸಮತೋಲವೇರ್ಪಟ್ಟು ತಿರುಬಾನಿಯನ್ನು ತಲಪುವ ಅಧಿಕೋಷ್ಣಿತ ಆವಿಯ ಉಷ್ಣತೆ ಆವಿಯ ಸರಬರಾಜುವೇಗದಲ್ಲಿ ಏನೇ ಏರಿಳಿತವಿರಲಿ, ಹೆಚ್ಚು ಕಡಿಮೆ ಒಂದೇ ಮಟ್ಟದಲ್ಲಿರುತ್ತದೆ.
(ಕೆ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ